ಚರ್ಚಿಲ್, ವಿನ್‍ಸ್ಟನ್ ಲೆನರ್ಡ್ ಸ್ಪೆನ್ಸರ್

1874-1965. ಬ್ರಿಟಿಷ್ ರಾಜನೀತಿಜ್ಞ: ಎರಡನೆಯ ಮಹಾಯುದ್ಧದಲ್ಲಿ ತನ್ನ ದೇಶವನ್ನು ವಿಜಯದ ಹಾದಿಯಲ್ಲಿ ಕೊಂಡೊಯ್ದ ಮಹಾನಾಯಕ. 1874ರ ನವೆಂಬರ್ 30ರಂದು ಆಕ್ಸ್‍ಫರ್ಡ್‍ಷೈರ್‍ನ ಬ್ಲೆನ್‍ಹೀಂ ಅರಮನೆಯಲ್ಲಿ ಜನಿಸಿದರು. ತಂದೆ ಲಾರ್ಡ್ ರ್ಯಾಂಡಾಲ್ಫ್ ಚರ್ಚಿಲ್: ತಾಯಿ ಜೀನೆಟ್ ಜೆರೋಂ, ಅಮರಿಕದ ಉದ್ಯಮಿಯೊಬ್ಬನ ಮಗಳು. ಪ್ರಾರಂಭಿಕ ವಿದ್ಯಾಭ್ಯಾಸವಾದ ಮೇಲೆ ಚರ್ಚಿಲ್ ಹ್ಯಾರೊದಲ್ಲಿ ವ್ಯಾಸಂಗ ಮುಂದುವರಿಸಿದರು. ಆದರೆ ಅಲ್ಲಿ ಅಷ್ಟೇನೂ ಸಮರ್ಪಕವಾಗಿ ಮುಂದುವರಿಯಲಿಲ್ಲವಾದ್ದರಿಂದ ತಂದೆ ಅವರನ್ನು ಅಲ್ಲಿಂದ ಬಿಡಿಸಿ ಸ್ಯಾಂಡ್‍ಹಸ್ರ್ಟ್‍ನ ರಾಯಲ್ ಮಿಲಿಟರಿ ಶಾಲೆಗೆ ಸೇರಿಸಿದರು (1893). 1894ರಲ್ಲಿ ಅವರು ಯಶಸ್ವಿಯಾಗಿ ಅಲ್ಲಿಂದ ಹೊರಬಂದರು. ಮರುವರ್ಷ ತಂದೆ ತೀರಿಕೊಂಡರು. ಚರ್ಚಿಲರು ಆ ವರ್ಷ 4ನೆಯ ಹುಸ್ಸಾರ್ ಪಡೆ ಸೇರಿ, ಎರಡು ತಿಂಗಳುಗಳ ಕಾಲ ಕ್ಯೂಬದಲ್ಲಿದ್ದು ಲಂಡನಿನ ಡೇಲಿ ಗ್ರಾಫಿಕ್ ಪತ್ರಿಕೆಗೆ ಆ ದೇಶದ ಸ್ವಾತಂತ್ರ್ಯ ಸಂಗ್ರಾಮ ಕುರಿತು ವರದಿಗಳನ್ನು ಕಳಿಸುತ್ತಿದ್ದರು.

1896ರಲ್ಲಿ ತಮ್ಮ ರೆಜಿಮೆಂಟಿನೊಂದಿಗೆ ಭಾರತಕ್ಕೆ ಬಂದು, ವಾಯುವ್ಯ ಗಡಿ ನಾಡಿನಲ್ಲಿ ನಡೆಯುತ್ತಿದ್ದ ಯುದ್ಧವನ್ನು ಕುರಿತ ವರದಿಗಳನ್ನು ಬರೆಯುವುದರ ಜೊತೆಗೆ, ತತ್ತ್ವಜ್ಞಾನ, ಇತಿಹಾಸ, ಅರ್ಥಶಾಸ್ತ್ರ-ಇವನ್ನು ಅವರು ಅಧ್ಯಯನ ಮಾಡಿದರು. ಅವರ ವರದಿಗಳು ಜನಪ್ರಿಯವಾದವು. ಚರ್ಚಿಲರು ಅಲ್ಲಿಂದ ಮುಂದೆ ಲೇಖನವನ್ನು ತಮ್ಮ ಒಂದು ಮುಖ್ಯ ಹವ್ಯಾಸವಾಗಿ ಇಟ್ಟುಕೊಂಡರು. ರಾಜಕೀಯ ಪ್ರವೇಶ ಮಾಡುವ ಉದ್ದೇಶದಿಂದ 1899ರಲ್ಲಿ ಸೈನಿಕ ಹುದ್ದೆಗೆ ರಾಜೀನಾಮೆ ನೀಡಿದ ಚರ್ಚಿಲರು ಕನ್ಸರ್ವೆಟಿವ್ ಪಕ್ಷದ ಪರವಾಗಿ ಓಲ್ಡ್ ಹ್ಯಾಂನಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರಿಗೆ ಜಯ ಲಭಿಸಲಿಲ್ಲ. ಆದರೆ ಚರ್ಚಿಲ್ ನಿರಾಶರಾಗಲಿಲ್ಲ. ಲಂಡನಿನ ಮಾರ್ನಿಂಗ್ ಪೋಸ್ಟ್ ಪತ್ರಿಕೆಗಾಗಿ ದಕ್ಷಿಣ ಆಫ್ರಿಕದ ಯುದ್ಧದ ವರದಿಗಾರರಾಗಿ ಕೆಲಸ ಮಾಡಿದರು. ಬೋಯರರಿಗೆ ಸೆರೆಸಿಕ್ಕಿದ್ದು, ಶಿಬಿರದಿಂದ ತಪ್ಪಿಸಿಕೊಂಡು ಬ್ರಿಟನ್‍ಗೆ ಹಿಂದಿರುಗಿದಾಗ ಚರ್ಚಿಲರು ವೀರರೆಂದು ಖ್ಯಾತಿ ಗಳಿಸಿದ್ದರು. 1900ರಲ್ಲಿ ಓಲ್ಡ್ ಹ್ಯಾಂ ಚುನಾವಣೆಗಳಲ್ಲಿ ಅವರಿಗೆ ಜಯ ಲಭಿಸಿತು. ಅವರು ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಉಪನ್ಯಾಸ ಪ್ರವಾಸಮಾಡಿ, ತಮ್ಮ ಮುಂದಿನ ರಾಜಕೀಯ ಜೀವನಕ್ಕಾಗಿ ಹಣ ಸಂಪಾದಿಸಿದರು.
ಚರ್ಚಿಲ್ ಟೋರಿ ಪಕ್ಷದವರಾಗಿದ್ದರೂ ಆ ಪಕ್ಷದ ನೀತಿಯನ್ನು ಅನೇಕ ವೇಳೆ ಟೀಕಿಸುತ್ತಿದ್ದರು. ಬೋಯೆರರ ಬಗ್ಗೆ ಅವರದು ಉದಾರ ದೃಷ್ಟಿಯಾಗಿತ್ತು. 1904ರಲ್ಲಿ ಅವರು ಆ ಪಕ್ಷವನ್ನು ತ್ಯಜಿಸಿ ಲಿಬರಲ್ ಪಕ್ಷವನ್ನು ಸೇರಿದರು 1906ರಲ್ಲಿ ಓಲ್ಡ್‍ಹ್ಯಾಂ ಚುನಾವಣಾ ಕ್ಷೇತ್ರದಲ್ಲಿ ಅವರಿಗೆ ಸೋಲಾಯಿತಾದರೂ ಮ್ಯಾಂಜೆಸ್ಟರಿನಿಂದ ಅವರು ಜಯ ಗಳಿಸಿದರು. ಹೊಸದಾಗಿ ಸ್ಥಾಪಿತವಾದ ಲಿಬರಲ್ ಸರ್ಕಾರದಲ್ಲಿ ಅವರಿಗೆ ವಸಾಹತುಗಳ ಕೆಳ ಕಾರ್ಯದರ್ಶಿಯ ಅಧಿಕಾರ ಪ್ರಾಪ್ತವಾಯಿತು. ಅವರು 1908ರಲ್ಲಿ ಬೋರ್ಡ್ ಆಫ್ ಟ್ರೇಡ್‍ನ ಅಧ್ಯಕ್ಷರಾದರು. ಆ ವರ್ಷ ನಡೆದ ಚುನಾವಣೆಗಳಲ್ಲಿ ಮ್ಯಾಂಜೆಸ್ಟರಿನಲ್ಲಿ ಸೋತರು. ಆದರೆ ಡಂಡೀಯಲ್ಲಿ ಅವರಿಗೆ ಜಯ ಲಭಿಸಿತು. ಚರ್ಚಿಲರಿಗೆ ವಿವಾಹವಾದ್ದು ಆ ವರ್ಷವೇ. ಪತ್ನಿ ಕ್ಲೆಮೆಂಟೇನ್. ಬೋರ್ಡ್ ಆಫ್ ಟ್ರೇಡಿನ ಅಧ್ಯಕ್ಷರಾಗಿ ಅವರು ಕಾರ್ಮಿಕರ ಸ್ಥಿತಿಯನ್ನು ಉತ್ತಮ ಪಡಿಸುವ ಅನೇಕ ಕ್ರಮಗಳನ್ನು ತಂದರು. 1910ರಲ್ಲಿ ಚರ್ಚಿಲರು ಗೃಹಸಚಿವರಾದರು. ಕಾರಾಗೃಹ ಸುಧಾರಣೆಯಲ್ಲಿ ಅವರು ವಿಶೇಷ ಆಸಕ್ತಿ ವಹಿಸಿದರು. ಆಗ ಸಂಭವಿಸಿದ ಕೈಗಾರಿಕಾ ಅಶಾಂತಿಯಲ್ಲಿ ಚರ್ಚಿಲ್ ವಹಿಸಿದ ಪಾತ್ರದಿಂದ ತೀವ್ರವಾದಿಗಳನೇಕರ ಬೆಂಬಲ ತಪ್ಪಿಹೋಯಿತು. 1911ರಲ್ಲಿ ಅವರು ಅಡ್ಮಿರಾಲ್ಟಿಯ ಮುಖ್ಯರಾದರು. ನೌಕಾದಳವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಅವರು ಯಶಸ್ಸು ಗಳಿಸಿದರು. ಸ್ವಲ್ಪಕಾಲದ ಮೇಲೆ ಒಂದನೆಯ ಮಹಾಯುದ್ಧ ಆರಂಭವಾದಾಗ ಅವರು ನೌಕಾಕಾರ್ಯಾಚರಣೆಯ ನಿರ್ದೇ ಶನದ ಹೊಣೆ ಹೊತ್ತರು. ಡಾರ್ಡೆನಲ್ಸ್ ಕಾರ್ಯಾಚರಣೆ ವಿಫಲವಾಗಿ, ಮಂತ್ರಿ ಸಂಪುಟಕ್ಕೂ ಅವರಿಗೂ ಭಿನ್ನಾಭಿಪ್ರಾಯಗಳು ಉದ್ಭವಿಸಿದಾಗ ಅವರು ರಾಜೀನಾಮೆ ಕೊಟ್ಟು ಸರ್ಕಾರದಿಂದ ಹೊರಬಂದು ಯೋಧರಾಗಿ ಯುದ್ಧದಲ್ಲಿ ಭಾಗವಹಿಸಿದರು. 1915ರಲ್ಲಿ ಪಾರ್ಲಿಮೆಂಟಿಗೆ ಹಿಂದಿರುಗಿದರು. 1917ರಲ್ಲಿ ಲಾಯ್ಡ್ ಜಾರ್ಜ್ ಸರ್ಕಾರದಲ್ಲಿ ಅವರಿಗೆ ಯುದ್ಧಸಾಮಗ್ರಿ ಸಚಿವ ಹುದ್ದೆ ದೊರಕಿತು. 1919ರಲ್ಲಿ ಅವರು ಯುದ್ಧ ಸಚಿವರಾದರು. ರಷ್ಯನ್ ಕ್ರಾಂತಿ ಸಂಭವಿಸಿದಾಗ ಬಾಲ್ಷೆವಿಕರ ವಿರುದ್ಧ ಬಿಳಿಯ ರಷ್ಯನರಿಗೆ ನೆರವು ನೀಡುವುದು ಅವರ ಉದ್ದೇಶವಾಗಿತ್ತು. 1920ರಲ್ಲಿ ಪೋಲೆಂಡು ಉಕ್ರೇನಿನ ಮೇಲೆ ಆಕ್ರಮಣ ನಡೆಸಿದಾಗ ಪೋಲೆಂಡಿಗೆ ಅವರು ನೆರವು ನೀಡಿದರು. ಈ ಎಲ್ಲ ಕ್ರಮಗಳಿಂದಾಗಿ ಬ್ರಿಟಿಷ್ ಕಾರ್ಮಿಕ ಪಕ್ಷ ಅವರನ್ನು ಕಟುವಾಗಿ ಟೀಕಿಸಿತು. 1921ರಲ್ಲಿ ವಸಾಹತು ಕಚೇರಿಯ ಮುಖ್ಯರಾಗಿ ಅವರು ಐರ್ಲೆಂಡ್‍ಗೆ ಸ್ವಯಮಾಡಳಿತ ನೀಡುವ ಸಂಧಾನಗಳಲ್ಲಿ ಪ್ರಮುಖ ಪಾತ್ರವಹಿಸಿದರು.

1922ರಲ್ಲಿ ತುರ್ಕಿಯ ವಿರುದ್ಧವಾಗಿ ಲಾಯ್ಡ್ ಜಾರ್ಜ್ ಅನುಸರಿಸಿದ ನೀತಿಯಿಂದಾಗಿ ಅವರ ಸಮ್ಮಿಶ್ರ ಮಂತ್ರಿಮಂಡಲ ಕೊನೆಗೊಂಡಿತು. ಅದರೊಂದಿಗೆ ಚರ್ಚಿಲರೂ ಅಧಿಕಾರ ಕಳೆದುಕೊಂಡರು. ಅನಂತರ ನಡೆದ ಮಹಾ ಚುನಾವಣೆಗಳಲ್ಲಿ ಚರ್ಚಿಲರೂ ಸ್ಪರ್ಧಿಸಿದರು. ಆದರೆ ಅವರು ಅಪೆಂಡಿಸೈಟಿಸ್‍ಗಾಗಿ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯಿಂದಾಗಿ ಪ್ರಚಾರಕಾರ್ಯದಲ್ಲಿ ನಿರತರಾಗಲು ಸಾಧ್ಯವಾಗಲಿಲ್ಲ. ಅವರಿಗೆ ಸೋಲಾಯಿತು. ತಾವು ಅಧಿಕಾರರಹಿತರೂ ಸ್ಥಾನರಹಿತರೂ ಪಕ್ಷ ರಹಿತರೂ ಅಪೆಂಡಿಕ್ಸ್‍ರಹಿತರೂ ಆಗಿರುವುದಾಗಿ ಅವರೇ ಹೇಳಿಕೊಂಡರು.

ಚರ್ಚಿಲರ ಆಗಿನ ಸ್ಥಿತಿ ಅಷ್ಟೇನೂ ಸಮರ್ಪಕವಾಗಿರಲಿಲ್ಲ. ಉದಾರವಾದದಿಂದ ಅವರು ದೂರ ಸರಿಯುತ್ತಿದ್ದರು. ಕನ್ಸರ್ವೆಟಿವ್ ಪಕ್ಷೀಯರು ಅವರ ಬಗ್ಗೆ ಇನ್ನೂ ಸಂಶಯಗ್ರಸ್ತರಾಗಿದ್ದರು. 1923ರ ಚುನಾವಣೆಯ ಅನಂತರ ಅವರು ಲಿಬರಲ್ ಪಕ್ಷವನ್ನು ತ್ಯಜಿಸಿದರು. ಆಗ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಚರ್ಚಿಲರಿಗೆ ಸಮಾಜವಾದದಲ್ಲಿ ನಂಬಿಕೆಯೇನೂ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಬಾಲ್ಡ್‍ವಿನ್ ಗೆದ್ದುಬಂದರು. ಚರ್ಚಿಲರೂ ಸಂವಿಧಾನವಾದಿಯಾಗಿ ಎಸೆಕ್ಸ್‍ನ ಎಪಿಂಗ್ ವಿಭಾಗದಿಂದ ಜಯ ಗಳಿಸಿದರು. ಲಿಬರಲ್ ಕಾರ್ಯಕ್ರಮವನ್ನು ತಿರಸ್ಕರಿಸಲು ಅವರು ಸಿದ್ಧರಿದ್ದರು. ಅವರು ಅದುವರೆಗೂ ಪ್ರತಿಪಾದಿಸುತ್ತಿದ್ದ ಮುಕ್ತ ವ್ಯಾಪಾರನೀತಿಯನ್ನೂ ತೊರೆದರು. ಅವರಿಗೆ ಹಣಕಾಸಿನ ಸಚಿವ ಪದವಿ (ಚಾನ್ಸೆಲರ್ ಆಫ್ ದಿ ಎಕ್ಸ್‍ಚೆಕರ್) ದೊರಕಿತು. ಅವರು ಕನ್ಸರ್ವೆಟಿವ್ ಪಕ್ಷಕ್ಕೆ ಪುನರಾಗಮಿಸಿದರು. ಹಣಕಾಸಿನ ಕ್ಷೇತ್ರದಲ್ಲಿ ಅವರಿಗೇನೂ ಕೌಶಲವಿರಲಿಲ್ಲ. ಬ್ರಿಟನಿನಲ್ಲಿ ಸುವರ್ಣ ಪ್ರಮಿತಿಯನ್ನು ಪುನಃ ಸ್ಥಾಪಿಸಿದ್ದು ಅವರು ಅನುಸರಿಸಿದ ದೊಡ್ಡ ಅವಿವೇಕದ ಕ್ರಮವೆಂದು ಟೀಕಿಸಲಾಗಿದೆ. ಆದರೆ ಆ ತೀರ್ಮಾನ ಕೈಗೊಳ್ಳಲು ಅವರಿಗಿಂತ ಅವರ ಅಧಿಕಾರಿಗಳೇ ಹೆಚ್ಚು ಕಾರಣ. ಆ ಕ್ರಮದ ಫಲವಾಗಿ ದೇಶದಲ್ಲಿ ಬೆಲೆಗಳು ಇಳಿದುವು. ಉತ್ಪಾದನೆ ತಗ್ಗಿತು, ನಿರುದ್ಯೋಗ ಹೆಚ್ಚಿತು. ಕಾರ್ಮಿಕರು ಭಾರಿ ಸಂಪು ಹೂಡಿದರು. ಚರ್ಚಿಲರು ಆ ಸಂದರ್ಭದಲ್ಲಿ ತಳೆದ ನಿರ್ದನೆಯ ಧೋರಣೆಯಿಂದಾಗಿ ಕಾರ್ಮಿಕವರ್ಗದ ವಿರೋಧ ಗಳಿಸಿಕೊಂಡರು.

1929ರಲ್ಲಿ ನಡೆದ ಚುನಾವಣೆಗಲ್ಲಿ ಕನ್ಸರ್ವೆಟಿವ್ ಪಕ್ಷಕ್ಕೆ ಬಹುಮತ ಬರಲಿಲ್ಲ. ಕಾರ್ಮಿಕ ಪಕ್ಷ ಲಿಬರಲ್ ಪಕ್ಷದ ಬೆಂಬಲದಿಂದ ಮತ್ತೆ ಅಧಿಕಾರಕ್ಕೆ ಬಂತು. ಮುಂದಿನ ಹತ್ತು ವರ್ಷಗಳ ಕಾಲ ಚರ್ಚಿಲ್ ಸ್ವತಂತ್ರವಾದ ಹಾಗೂ ಜನಪ್ರಿಯವಲ್ಲದ ಮಾರ್ಗ ಅನುಸರಿಸಿದರು. ಭಾರತ ಸುಧಾರಣಾ ಮಸೂದೆಯನ್ನು ಅವರು ತೀವ್ರವಾಗಿ ವಿರೋಧಿಸಿದರು. ಆ ಮಸೂದೆಯನ್ನು ತರುವುದರಿಂದ ಗಾಂಧಿಯವರಿಗೆ ಮಣಿದಂತಾದೀತೆಂಬುದು ಅವರ ವಾದ. ಗಾಂಧಿಯವರು ಅರೆನಗ್ನ ಫಕೀರ-ಎಂದು ಅವರ ತಾತ್ಸಾರ. ಎಂಟನೆಯ ಎಡ್ವರ್ಡ್ ದೊರೆ ತನ್ನ ಪ್ರೇಯಸಿಗಾಗಿ ರಾಜ್ಯವನ್ನೇ ತೊರೆಯಬೇಕಾಗಿ ಬಂದ ಪ್ರಸಂಗದಲ್ಲಿ ಆಗಿನ ಪ್ರಧಾನಿ ಬಾಲ್ಡ್ವಿನರ ನೀತಿಯನ್ನು ಚರ್ಚಿಲ್ ವಿರೋಧಿಸಿದರು. ಆ ಸಮಯದಲ್ಲಿ ಜರ್ಮನಿ ಹಿಟ್ಲರನ ನೇತೃತ್ವದಲ್ಲಿ ಶಾಂತಿಗೆ ಮಾರಕವಾಗಿ ಬೇಳೆಯುತ್ತಿತ್ತು. ಮೊದಲಿಂದಲೂ ಚರ್ಚಿಲ್ ಈ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇದ್ದರು. ಹಿಟ್ಲರನ್ನು ತಣಿಸುವ ನೀತಿಯನ್ನು ವಿರೋಧಿಸುತ್ತಲೇ ಇದ್ದರು. ಆದರೆ ಅವರ ಮಾತನ್ನು ಸರ್ಕಾರ ಕೇಳಲಿಲ್ಲ. ಜರ್ಮನ್ ಪುನಶ್ಯಸ್ತ್ರೀಕರಣದ ಬಗ್ಗೆ ಅವರು ನೀಡಿದ ಅಂಕೆಅಂಶಗಳನ್ನು ಆಗ ಅವರ ಪಕ್ಷದವರೇ ಸುಳ್ಳೆಂದು ಸಾರಿದರು. ನಾಟ್ಸಿಗಳೂ ಅವರನ್ನು ಅವಹೇಳನಕ್ಕೆ ಗುರಿಪಡಿಸಿದರು. ಬ್ರಿಟನ್ನಿನಲ್ಲಿ ಹಲವರು ಅವರನ್ನು ಮಹತ್ವಾಕಾಂಕ್ಷಿಯೆಂದು ಹೇಳಿದರು. ಚರ್ಚಿಲರು ಜನಪ್ರಿಯತೆ ಕಳೆದುಕೊಂಡು ಬಹುತೇಕ ಏಕಾಂಗಿಯಾಗಿ ಉಳಿಯಬೇಕಾಯಿತು.

ಚೆಕೊಸ್ಲೊವಾಕಿಯದ ಸುಡೆಟನ್‍ಲ್ಯಾಂಡನ್ನು ಹಿಟ್ಲರ್ ವಶಪಡಿಸಿಕೊಳ್ಳಲು ಬ್ರಿಟನ್ನು ಒಡಂಬಡಿಕೆ ನೀಡಬೇಕಾಗಿ ಬಂದಾಗ ದೇಶಕ್ಕೆ ಅಪಾಯದ ಅರಿವು ಸ್ವಲ್ಪ ಮಟ್ಟಿಗೆ ಉಂಟಾಯಿತು. ರಷ್ಯ-ಅಮೆರಿಕಗಳೊಂದಿಗೆ ಬ್ರಿಟನ್ನು ಸ್ನೇಹದ ಒಪ್ಪಂದ ಮಾಡಿಕೊಂಡು ಹಿಟ್ಲರನ ಆಕ್ರಮಣಕಾರಿ ಪ್ರವೃತ್ತಿಗೆ ತಡೆ ಒಡ್ಡಬೇಕೆಂಬುದು ಚರ್ಚಿಲರ ಅಭಿಪ್ರಾಯವಾಗಿತ್ತು. 1939ರ ಸೆಪ್ಟೆಂಬರ್ 3ರಂದು ಎರಡನೆಯ ಮಹಾಯುದ್ಧ ಆರಂಭವಾಯಿತು. ಚರ್ಚಿಲ್ ಮತ್ತೆ ನೌಕಾಬಲದ ಪ್ರಥಮ ಲಾರ್ಡ್ ಆಗಿ ನೇಮಕವಾದರು. ಕ್ರಮಕ್ರಮವಾಗಿ ಅವರ ಖ್ಯಾತಿ ಅಧಿಕವಾಯಿತು. ಆಗ ಬ್ರಿಟನ್ನಿನ ಪ್ರಧಾನಿಯಾಗಿದ್ದು. ದುರ್ಬಲ ನೀತಿ ಅನುಸರಿಸುತ್ತಿದ್ದ ಚೇಂಬರ್ಲಿನರ ಖ್ಯಾತಿ ತಗ್ಗುತ್ತಿತ್ತು. ಜರ್ಮನರ ನಾರ್ವೇ  ಆಕ್ರಮಣದಿಂದ ಬ್ರಿಟನ್ನಿಗಾದ ಪರಾಭವದ ಪರಿಣಾಮವಾಗಿ ಚೇಂಬರ್ಲಿನ್ ರಾಜೀನಾಮೆ ನೀಡಿದರು. ಆಗ ಪ್ರಧಾನಿಯಾಗಬಹುದಾಗಿದ್ದ ಏಕೈಕ ವ್ಯಕ್ತಿಯೆಂದರೆ ಚರ್ಚಿಲ್, ಆ ವೇಳೆಗೆ ಸರ್ಕಾರದ ಎಲ್ಲ ಮುಖ್ಯ ಶಾಖೆಗಳ ಅನುಭವವನ್ನೂ ಪಡೆದಿದ್ದ ಅವರು 1940ರ ಮೇ 10ರಂದು-ಹಿಟ್ಲರನ ಸೇನೆಗಳು ಹಾಲೆಂಡಿನ ಆಕ್ರಮಣದಲ್ಲಿ ತೊಡಗಿದಂದು-ಪ್ರಧಾನಿಯಾದರು. ಧೈರ್ಯದಿಂದ ಕೈಗೊಂಡ ತೀರ್ಮಾನಗಳೇ ವಿವೇಕಪೂರ್ಣವಾದ ತೀರ್ಮಾನಗಳು ಎಂಬುದು ಅವರ ನಂಬಿಕೆ. 'ವಿಜಯ, ಏನೇ ಆಗಲಿ ವಿಜಯ ಎಂಬುದು ಅವರ ಧ್ಯೇಯವಾಕ್ಯ. ಅವರಿಗೆ ಆಗ 65ರ ಹರಯ. ಅವರ ದೃಢನಿಲುವು, ದಿಟ್ಟತನ, ನಾಯಕಗುಣ-ಇವು ಆಗ ಸಂಪೂರ್ಣವಾಗಿ ಪ್ರಕಾಶಕ್ಕೆ ಬಂದುವು.

ಇತಿಹಾಸದಲ್ಲಿ ಹಿಂದೆಂದೂ ಬಾರದಿದ್ದಂಥ ದೊಡ್ಡ ಗಂಡಾಂತರದಲ್ಲಿ ರಾಷ್ಟ್ರ ಆಗ ಸಿಲುಕಿತ್ತು. ರಾಷ್ಟ್ರೀಯ ಸರ್ಕಾರದ ನೇತಾರರಾಗಿ ಚರ್ಚಿಲರು ಅದನ್ನು ಎದುರಿಸಿದರು. ಫ್ರಾನ್ಸ್ ಪತನ ಹೊಂದಿತು. ಡನ್‍ಕರ್ಕ್‍ನಿಂದ ಬ್ರಿಟಿಷ್ ಸೇನೆ ವಾಪಸಾಗಬೇಕಾಯಿತು. ಅಂಥ ದುರ್ದಿನಗಳಲ್ಲಿ ಚರ್ಚಿಲರ ಬಿಚ್ಚು ಮಾತೂ ದಿಟ್ಟತನವೂ ಅಸಾಧಾರಣವಾದಂಥವು. ಯಾವ ಸೇನೆಯೂ ಮಾಡದ ಕೆಲಸವನ್ನು ಅವರ ಮಾತುಗಳು ನಿರ್ವಹಿಸಿದುವು. ವಾಮಿಯಾಗಿ, ಲೇಖಕರಾಗಿ ಆ ವೇಳೆಗಾಗಲೇ ಕೀರ್ತಿ ಗಳಿಸಿದ್ದ ಚರ್ಚಿಲರು ಬಾನುಲಿಯ ಪ್ರಸಾರ ಭಾಷಣಗಳಿಂದ ಹೊಸ ಬಗೆಯ ಖ್ಯಾತಿ ಸಂಪಾದಿಸಿದರು. ಅವರ ಮಾತುಗಳು ಕೋಟ್ಯಾಂತರ ದಲಿತ ಜನರಿಗೆ ಆಶಾವಾದದ ಸಂದೇಶಗಳಾಗಿ ಪರಿಣಮಿಸಿದುವು. ಆಕ್ರಮಣವನ್ನು ಪ್ರತಿಭಟಿಸಲು ಜನಕ್ಕೆ ಆ ಮಾತುಗಳು ಧೈರ್ಯ ತುಂಬಿದುವು.

ರಹಸ್ಯದ ತೆರೆಯ ಹಿಂದೆ ಅವರು ಮಾಡಿದ ಕೃತಿಗಳು ವಿಜಯದ ಅಸ್ತಿಭಾರ ನಿರ್ಮಿಸಿದುವು. ತಮ್ಮ ಸಹೋದ್ಯೋಗಿಗಳಲ್ಲಿ ಅವರು ಹುರುಪು ತುಂಬಿದರು. ಕೆಂಪು ಟೇಪನ್ನು ಕತ್ತರಿಸಿ ಸರ್ಕಾರದ ಯಂತ್ರದ ವೇಗ ಹೆಚ್ಚಿಸಿದರು. ಅವರ ಟಿಪ್ಪಣಿಗಳು ಸಂಗ್ರಹವಾಗಿಯೂ ಶಕ್ತಿಪೂರ್ಣವಾಗಿಯೂ ಇದ್ದುವು. ಭೂವಾಯು ಜಲ ಸೇನಾ ದಂಡಾಧಿಕಾರಿಗಳೊಂದಿಗೆ ಅವರ ಸಂಪರ್ಕ ಅತ್ಯಂತ ನಿಟವಾದ್ದಾಗಿತ್ತು. ಆ ಆಧಿಕಾರಿಗಳು ಚರ್ಚಿಲರಲ್ಲಿ ನಿಷ್ಠೆಯಿಂದ ನಡೆದುಕೊಂಡರು. ಚರ್ಚಿಲರ ಅತ್ಯುತ್ಸಾಹಕ್ಕೆ ಅವರು ಅಗಾಗ ಸಹನೆಯ ಕಡಿವಾಣ ಹಾಕುತ್ತಿದ್ದದ್ದುಂಟು.

ಅಮೆರಿಕವೂ ರಷ್ಯವೂ ಯುದ್ಧದಲ್ಲಿ ಬ್ರಿಟನ್ನಿನೊಂದಿಗೆ ಕೂಡಿಕೊಳ್ಳಬೇಕೆಂಬುದು ಆರಂಭದ ದಿನಗಳಲ್ಲಿ ಚರ್ಚಿಲ್ ಹೊಂದಿದ್ದ ಆಕಾಂಕ್ಷೆ. 1941ರಲ್ಲಿ ಹಿಟ್ಲರನ ಸೇನೆ ರಷ್ಯವನ್ನಾಕ್ರಮಿಸಿದಾಗ, ಜಪಾನ್ ಪರ್ಲ್ ಹಾರ್ಬರಿನ ಮೇಲೆ ದಾಳಿ ಮಾಡಿದಾಗ ಅವೆರಡೂ ದೇಶಗಳು ಯುದ್ಧಪ್ರವೇಶ ಮಾಡಿದುವು. ಕಮ್ಯೂನಿಸಮನ್ನು ಹಿಂದೆ ಕಟುವಾಗಿ ಟೀಕಿಸಿದ್ದ ಚರ್ಚಿಲರೇ ಈಗ ಆ ಬಗ್ಗೆ ಒಂದು ಚಕಾರವನ್ನೂ ಹಿಂದೆಗೆದುಕೊಳ್ಳದೆ ರಷ್ಯಕ್ಕೆ ಎಲ್ಲ ಬಗೆಯ ನೆರವನ್ನೂ ನೀಡುವುದಾಗಿ ಘೋಷಿಸಿದರು. ಆ ಎರಡೂ ದೇಶಗಳು ಯುದ್ಧ ಪ್ರವೇಶ ಮಾಡಿದ್ದರಿಂದ ಈಗ ವಿಜಯ ಸಿದ್ಧವಾದಂತೆಂದು ಚರ್ಚಿಲ್ ಬಗೆದರು. ಆದರೂ ಕಷ್ಟದ ದಿನಗಳು ಪೂರೈಸಿರಲಿಲ್ಲ. ಚರ್ಚಿಲರು ಪದೇ ಪದೇ ಅಟ್ಲಾಂಟಿಕನ್ನು ಕಾಡಿ ಅಮೆರಿಕ ಕೆನಡಗಳಿಗೆ, ಅವುಗಳೊಂದಿಗೆ ಸಮಾಲೋಚನೆ ಮತ್ತು ಅವುಗಳ ಸಹಕಾರಗಳಿಗಾಗಿ, ಭೇಟಿ ನೀಡುತ್ತಿದ್ದರು. ಅದೇ ಸಮಯದಲ್ಲಿ ಯಾವುದಾದರೊಂದು ಪರಾಜಯದ ಘಟನೆ ಕಾದಿರುತ್ತಿತ್ತು. ಚರ್ಚಿಲ್ ಟೀಕೆಗೆ ಒಳಗಾದರು. ಆದರೆ ಅವರ ನಾಯಕತ್ವದಲ್ಲಿ ನಂಬಿಕೆಯನ್ನು ಸಡಿಲಗೊಳಿಸುವಂಥ ವಿರೋಧವೇನೂ ಇರಲಿಲ್ಲ. ಚರ್ಚಿಲರು ಎರಡು ಬಾರಿ ನ್ಯೂಮೋನಿಯಕ್ಕೆ ತುತ್ತಾದರೂ ಛಲ ಬಿಡದೆ ತಮ್ಮ ಕಾರ್ಯವನ್ನು ಮುಂದುವರಿಸಿದರು.
1942ರಲ್ಲಿ ಮಿತ್ರಸೇನೆಗಳು ಮೇಲುಗೈ ಸ್ಥಾಪಿಸಿದುವು. ಉತರ್ತ ಅಮೆರಿಕದಲ್ಲಿ ಇಂಗ್ಲೆಂಡ್-ಅಮೆರಿಕಗಳ ಕಾರ್ಯಾಚರಣೆ ಆರಂಭವಾಯಿತು. ರಷ್ಯನರು ವೀರಾವೇಶದಿಂದ ಸ್ಟಾಲಿನ್‍ಗ್ರಾಡ್ ರಕ್ಷಣೆಗಾಗಿ ಹೋರಾಡಿದರು. ಪಶ್ಚಿಮ ಯೂರೋಪಿನಲ್ಲಿ ಜರ್ಮನಿಯ ವಿರುದ್ಧ ಇನ್ನೊಂದು ಯುದ್ಧಮುಖವನ್ನು ತೆರೆಯಬೇಕೆಂಬುದು ರಷ್ಯದ ಕೇಳಿಕೆಯಾಗಿತ್ತು. ಅಮೆರಿಕವೂ ಇದಕ್ಕೆ ಒಡಂಬಡುತ್ತಿದ್ದರೂ ಕೂಡಲೇ ಅದನ್ನಾರಂಭಿಸಲು ಚರ್ಚಿಲ್ ಒಪ್ಪಲಿಲ್ಲ. 1944ರಲ್ಲಿ ನಾರ್ಮಂಡಿನಲ್ಲಿ ಮಿತ್ರ ಸೇನೆಗಳ ಆಕ್ರಮಣ ಆರಂಭವಾಯಿತು. 1945ರ ಏಪ್ರಿಲ್ ಅಂತ್ಯದ ವೇಳೆಗೆ ಜರ್ಮನಿಯ ಪತನ ಸಂಪೂರ್ಣವಾಯಿತು. ಮೇಯಲ್ಲಿ ಅದು ಶರಣಾಗತವಾಯಿತು. ಚರ್ಚಿಲರ ಕೀರ್ತ ಆಗ ಗರಿಷ್ಠ ಸ್ಥಿತಿ ಮುಟ್ಟಿತ್ತು.

ಆಗ ನಡೆದ ಚುನಾವಣೆಯಲ್ಲಿ ಚರ್ಚಿಲರ ಪಕ್ಷಕ್ಕೆ ಬಹುಮತ ಬರಲಿಲ್ಲ. ದೇಶದ ಜನತೆ ಚರ್ಚಿಲರ ಬಗ್ಗೆ ಕೃತಘ್ನತೆಯಿಂದ ವರ್ತಿಸಿತೆಂದೇನೂ ಇದರ ಅರ್ಥವಲ್ಲ. ಅವರ ಪಕ್ಷ ಚರ್ಚಿಲರ ಖ್ಯಾತಿಯನ್ನೇ ಅವಲಂಬಿಸಿತ್ತು. ಯುದ್ಧದಿಂದ ನೊಂದ ಜನಕ್ಕೆ ಆಗ ಬೇಕಾಗಿದ್ದದ್ದು ಸಾಮಾಜಿಕ ಕಾರ್ಯಕ್ರಮ. ಯಶಸ್ವಿಯಾಗಿ ಯುದ್ಧ ನಿರ್ವಹಿಸಿದ ಚರ್ಚಿಲರಿಗೆ ಶಾಂತಿಕಾಲದ ನಿರ್ಮಾಣಕಾರ್ಯದಲ್ಲಿ ಅಷ್ಟೇ ದಕ್ಷತೆ ಇದ್ದೀತೆಂದು ಜನ ಭಾವಿಸಲಿಲ್ಲ. ಲೇಬರ್ ಪಕ್ಷದ ಸರ್ಕಾರ ಬಂತು. ಭಾರತವೇ ಮುಂತಾದ ಅಧೀನ ದೇಶಗಳಿಗೆ ಸ್ವಾತಂತ್ರ್ಯ ಪ್ರಾಪ್ತವಾಯಿತು. ಸಾಮ್ರಾಜ್ಯ ವಿಸರ್ಜನೆಗೆ ನಾನು ಅಧ್ಯಕ್ಷತೆ ವಹಿಸಲಾರೆ-ಎಂದು ಹೇಳಿದ್ದ ಚರ್ಚಿಲರು ತಮ್ಮ ಮುಂದೆಯೇ ಆ ಸಾಮ್ರಾಜ್ಯ ಕರಗುತ್ತಿದ್ದದ್ದನ್ನು ಅಸಹಾಯಕರಾಗಿ ವೀಕ್ಷಿಸಬೇಕಾಯಿತು. ಲೇಬರ್ ಸರ್ಕಾರ ಬ್ರಿಟನ್ನಿನಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿತು. 

1951ರಲ್ಲಿ ನಡೆದ ಚುನಾವಣೆಗಲ್ಲಿ ಕನ್ಸರ್ವೆಟಿವ್ ಪಕ್ಷ ವಿಜಯ ಗಳಿಸಿತು. ಚರ್ಚಿಲ್ ಮತ್ತೆ ಪ್ರಧಾನಿಯಾದರು. 1953ರಲ್ಲಿ, ಎರಡನೆಯ ಎಲಿಜûಜೆತ್ ರಾಣಿಯ ಪಟ್ಟಾಭಿಷೇಕದ ವರ್ಷದಲ್ಲಿ, ಚರ್ಚಿಲರಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಕವೂ ನೈಟ್ ಪದವಿಯ ಅತ್ಯುನ್ನತ ಶ್ರೇಣಿಯ (ಗಾರ್ಟರ್) ಗೌರವವೂ ಪ್ರಾಪ್ತವಾದುವು. ಪಶ್ಚಿಮ ಯೂರೋಪ್ ಒಕ್ಕೂಟವನ್ನು ಸ್ಥಾಪಿಸಲು ಅವರು ಕಾರಣರು. 1955ರಲ್ಲಿ ಜಲಜನಕ ಬಾಂಬಿನ ತಯಾರಿಕೆಗೆ ಚರ್ಚಿಲರು ಆದೇಶ ನೀಡಿದರು. ಚತುರ್ರಾಷ್ಟ್ರಗಳ ಶೃಂಗ ಸಭೆ ನಡೆಸಿ ವಿಶ್ವ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಬೇಕೆಂಬುದು ಅವರ ಯೋಚನೆಯಾಗಿತ್ತು. ಆದರೆ ಅವರೇ ಆ ಕೆಲಸ ಮಾಡಲಾಗಲಿಲ್ಲ. 1955ರ ಏಪ್ರಿಲ್ 5ರಂದು ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ವಯಸ್ಸು ಅವರಿಗೆ ವಿರೋಧವಾಗಿತ್ತು.

ಅಧಿಕಾರ ತ್ಯಜಿಸಿದರೂ ಅವರು ಕಾಮನ್ಸ್ ಸಭೆಯ ಸದಸ್ಯತ್ವವನ್ನು ಬಿಡಲಿಲ್ಲ. ಅವರು ಸಭೆಯ ಪಿತೃ ಎನಿಸಿದರು. 	1959ರ ಚುನಾವಣೆಯಲ್ಲೂ ಅವರು ಜಯ ಗಳಿಸಿದರು. 1963ರಲ್ಲಿ ಅಮೆರಿಕದ ಗೌರವ ಪ್ರಜೆಯೆಂದು ಅಲ್ಲಿಯ ಕಾಂಗ್ರೆಸ್ ಅವರಿಗೆ ವಿಶೇಷವಾದ ಮನ್ನಣೆ ನೀಡಿತು. 1965ರ ಜನವರಿ 24ರಂದು ಚರ್ಚಿಲ್ ತೀರಿಕೊಂಡರು.
ಇತಿಹಾಸದಲ್ಲಿ ಚರ್ಚಿಲರ ಸ್ಥಾನ ಶಾಶ್ವತವಾದ್ದು. ಎಲ್ಲ ಮಹಾವ್ಯಕ್ತಿಗಳಂತೆ ಅವರಲ್ಲೂ ದೌರ್ಬಲ್ಯಗಳಿದ್ದುವು. ಒಂದು ಕಾಲದಲ್ಲಿ ಅಮೆರಿಕದಲ್ಲಿ ಕೂಡ ಅವರು ಅತ್ಯಂತ ಜನಪ್ರಿಯರಾಗಿದ್ದರು  ಅಧ್ಯಕ್ಷರಾಗಿದ್ದ ರೂಸ್ವೆಲ್ಟರನ್ನು ಮೀರಿಸಿದ್ದರು. ಯುದ್ಧಕಾಲದಲ್ಲಿ ಅವರು ರಷ್ಯದೊಂದಿಗೂ ಒಳ್ಳೆಯ ಸಂಬಂಧ ಬೆಳೆಸಿದ್ದರು. ಸ್ಟಾಲಿನ್‍ಗ್ರಾಡ್‍ನಲ್ಲಿ ರಷ್ಯನರು ವಿಜಯ ಗಳಿಸಿದ ಮೇಲೆ ಈ ಸಂಬಂಧ ತಣ್ಣಗಾಗತೊಡಗಿತು. ರಷ್ಯನರು ಚರ್ಚಿಲರ ಹಿಂದಿನ ನಡತೆ ಹೇಳಿಕೆಗಳನ್ನು ಮರೆತಿರಲಿಲ್ಲ. ರೂಸ್ವೆಲ್ಟರು ಸ್ಟಾಲಿನರೊಂದಿಗಿನ ಸಂಧಾನಗಳಲ್ಲಿ ಚರ್ಚಿಲರಿಗೆ ವಿಶೇಷ ಗಮನ ನೀಡುತ್ತಿರಲಿಲ್ಲ. ತಮ್ಮ ಸಾಮ್ರಾಜ್ಯನೀತಿಯಿಂದಾಗಿ ವಸಾಹತುಗಳ ಜನರ ಪ್ರೀತಿವಿಶ್ವಾಸಗಳನ್ನು ಅವರು ಗಳಿಸಲಾರದೆ ಹೋದರು. ಆದರೂ ಚರ್ಚಿಲರ ಯುದ್ಧ ಚಾಕಚಕ್ಯ, ಧೈರ್ಯ ಸಾಹಸ ಅಸದ ಶವಾದಂಥವು. ಎರಡನೆಯ ಮಹಾಯುದ್ಧದ ವಿಜಯಶಿಲ್ಪಿ ಅವರು.

ಇನ್ನು ಎರಡು ಕ್ಷೇತ್ರಗಳಲ್ಲಿ ಚರ್ಚಿಲರು ವಿಶೇಷ ಖ್ಯಾತಿ ಗಳಿಸಿದರು. ಬರವಣಿಗೆ ಒಂದು ಕ್ಷೇತ್ರ. ವಾಗ್ಮಿತೆಯಲ್ಲಿ ಅವರು ಬರ್ಕೆನಿಗೆ ಸಮಾನರು. ಇಂಗ್ಲಿಷ್ ಭಾಷೆ ಉಳಿದಿರುವವರೆಗೂ ಜನ ಅವರ ಭಾಷಣಗಳನ್ನು ಓದುತ್ತಾರೆ, ಅವರ ಗ್ರಂಥಗಳನ್ನು ಪಠಿಸುತ್ತಾರೆ.
ಚರ್ಚಿಲರಿಗೆ ಸೋಮಾರಿತನವೆಂದರೆ ಆಗದು. ಜೀವನ ಅಂಧಕಾರಮಯವಾಗಿದ್ದಾಗ ಅವರು ಬರೆವಣಿಗೆಯನ್ನು ನೆಮ್ಮಿದರು; ಚಿತ್ರ ಬಿಡಿಸುವುದರಲ್ಲಿ ನಿರತರಾದರು. ಅವರ ಚಿತ್ರಗಳಿಗೆ ರಾಯಲ್ ಆಕಾಡೆಮಿಯಲ್ಲಿ ಸ್ಥಾನ ದೊರಕಿದೆ. ಕೃಷಿಯಲ್ಲಿ ಕೂಡ ಅವರಿಗೆ ಆಸಕ್ತಿ. ಕೆಂಟಿನ ಹೊಲಮನೆಯಲ್ಲಿ ದನ ಸಾಕುವುದರಲ್ಲೂ ತೋಟಗಾರಿಕೆಯಲ್ಲೂ ಅವರು ನಿರತರಾಗಿದ್ದರು. ತಮ್ಮ ತೋಟಕ್ಕೆ ತಾವೇ ಗೋಡೆ ಕಟ್ಟಿದರು. 

ಚರ್ಚಿಲ್ ಬಹುಬೇಗ ಭಾವಪರವಶರಾಗುತ್ತಿದ್ದದ್ದುಂಟು. ಅವರಿಗೆ ಕೋಪ ಬರುತ್ತಿದ್ದದ್ದು ಬಲು ಬೇಗ. ಆದರೆ ದಯೆಯೂ ಇತ್ತು. ನಾಟಕೀಯತೆಯಲ್ಲಿ ಅವರನ್ನು ಸರಿಗಟ್ಟುವವರಿಲ್ಲ. ರಂಗಭೂಮಿಯನ್ನು ಪ್ರವೇಶಿಸಿದ್ದರೆ ಅವರು ಉತ್ತಮ ನಟರಾಗುತ್ತಿದ್ದರು. ತಮ್ಮ ಜೀವನದ ಕೊನೆಕೊನೆಗೆ ಅವರ ಮನಸ್ಸು ಬಹಳ ಮಾಗಿತ್ತು. ಯುವಕರ ನಡುವೆ ಅವರು ಖುಷಿಯಾಗಿರುತ್ತಿದ್ದರು. ಹಳೆಯ ಕಾಲದ ನಯ-ನಾಜೂಕುಗಳಿಂದ ಯುವಕರನ್ನು ಸಂತೋಷಗೊಳಿಸುತ್ತಿದ್ದರು. ಅವರ ವಿವಾಹಜೀವನ ಅತ್ಯಂತ ಸುಖಮಯವಾಗಿತ್ತು. ಅವರಿಗೆ ಒಬ್ಬ ಮಗ; ಜೀವಂತ ಪುತ್ರಿಯರು ಮೂವರು.
(ಜಿ.ವಿ.ಎನ್.

	ಚರ್ಚಿಲ್ ಸಾಹಿತ್ಯ : ಜಗತ್ಪ್ರಸಿದ್ಧ ಯೋಧ, ಶ್ರೇಷ್ಠ ರಾಜಕಾರಣಿ, ರಾಷ್ಟ್ರನಾಯಕ ಆಗಿದ್ದ ವಿನ್‍ಸ್ಟನ್ ಚರ್ಚಿಲ್ ಒಬ್ಬ ಪ್ರಖ್ಯಾತ ಸಾಹಿತಿಯೂ ಹೌದು. ಆತ್ಮಕಥೆ, ಜೀವನಚರಿತ್ರೆಗಳನ್ನು ಬರೆದರೂ ಅವರ ಕೃತಿಗಳಲ್ಲಿ ಬಹುತೇಕ ತಾವು ಕಂಡ ಸಮಕಾಲೀನ ಜಗತ್ತಿನ ಆಗುಹೋಗುಗಳನ್ನು ಕುರಿತ ಇತಿಹಾಸ ಗ್ರಂಥಗಳೇ ಹೆಚ್ಚು. ತಮ್ಮ ಬಿಡುವಿಲ್ಲದ ಸಾರ್ವಜನಿಕ ಕೆಲಸಕಾರ್ಯಗಳ ನಡುವೆ, ರಾಜಕೀಯ ಜೀವನದ ನಿರಂತರ ಹೋರಾಟದ ಮಧ್ಯೆ ಅವರು ಆಗಾಗ ಅಷ್ಟಿಷ್ಟು ಬಿಡುವು ಸಿಕ್ಕಾಗ ಗಂಭೀರ ವ್ಯಾಸಂಗದಲ್ಲಿ ತೊಡಗಿರುತ್ತಿದ್ದರು. ರಾಜಕೀಯದ ಅಗಚಾಟಲಿನ ನಡುವೆಯೂ ಅವರು ಎಂದೂ ಓದುಬರೆಹದ ಹವ್ಯಾಸವನ್ನು ಮರೆತವರಲ್ಲ ಅವರ ಬರೆಹದಲ್ಲಿ ಅವರ ಬದುಕಿನ ನಾಡಿ ಮಿಡಿಯುತ್ತಿದೆ. ಚರ್ಚಿಲ್ಲರ ಗ್ರಂಥಗಳಲ್ಲಿ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯ ಜಗತ್ತಿನ ಇತಿಹಾಸವನ್ನು ಕುರಿತ ವಿವೇಚನಾತ್ಮಕ ಸಮೀಕ್ಷೆ ಇದೆ. ಅವರು ತಮ್ಮ ಬಾಲ್ಯದಿಂದಲೂ ಇಂಗ್ಲಿಷ್ ಭಾಷೆಯ ಚೆಲುವನ್ನೂ ಬೆಡಗನ್ನೂ ಚೆನ್ನಾಗಿ ಅರಿತಿದ್ದು ಅತ್ಯಂತ ಶ್ರಮದಿಂದ, ಶ್ರದ್ಧೆಯಿಂದ, ಆ ಭಾಷೆಯನ್ನು ರೂಢಿಸಿಕೊಂಡಿದ್ದರು. ಇಂಗ್ಲಿಷ್ ನುಡಿಗಟ್ಟುಗಳ ಸೊಬಗನ್ನೂ ಪದಬಂಧಗಳ ಸಮ್ಮಿತಿಯನ್ನೂ ಮಾತಿನ ಔಚಿತ್ಯವನ್ನೂ ತಮ್ಮ ಚಿಕ್ಕಂದಿನಲ್ಲಿ ಒಬ್ಬ ವ್ಯಾಕರಣದ ಉಪಾಧ್ಯಾಯರು ತಮಗೆ ಅರೆದು ಹೊಯ್ದರು ಎಂದು ಒಂದು ಕಡೆ ಹೇಳಿಕೊಂಡಿದ್ದಾರೆ. ಶೈಲಿಯನ್ನು ವಿಷಯಕ್ಕೆ ತಕ್ಕಂತೆ, ಸಂದರ್ಭೋ ಚಿತವಾಗಿ ರೂಪಿಸುವುದರಲ್ಲಿ ಅವರದು ಎತ್ತಿದ ಕೈ. ಆಫ್ರಿಕ, ಭಾರತ ಮೊದಲಾದ ಕಡೆಗಳಲ್ಲಿ ಪತ್ರಿಕಾವರದಿಗಾರರಾಗಿ ಪಡೆದ ಪರಿಶ್ರಮದಿಂದಾಗಿ ಅವರು ಬರೆವಣಿಗೆಯಲ್ಲಿ ಒಂದು ಅಪೂರ್ವ ಸಾಮಥ್ರ್ಯವನ್ನು ಸಾಧಿಸಿಕೊಂಡಿದ್ದರು. ಅವರು ಮುಖ್ಯವಾಗಿ ಇತಿಹಾಸಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಬರೆದರೂ ಅವರ ಹೆಸರು ಪ್ರಸಿದ್ಧ ಸಾಹಿತಗಳ ಸಾಲಿನಲ್ಲಿ ಸೇರಿಹೋಗಿದೆ. 1953ರಲ್ಲಿ ನೊಬೆಲ್ ಸಾಹಿತ್ಯ ಪಾರಿತೋಷಕಗಳಿಸಿದ ಚರ್ಚಿಲ್ ಆಧುನಿಕ ಇಂಗ್ಲಿಷ್ ಗದ್ಯಶಿಲ್ಪಿಗಳಲ್ಲೊಬ್ಬರಾಗಿದ್ದಾರೆ. ಅವರ ಗ್ರಂಥಗಳು ಬೇರೆ ಬೇರೆ ಕಾಲದಲ್ಲಿ ಸಂದರ್ಭಗಳಲ್ಲಿ ಬರೆದ ಸಾಮಯಿಕ ಬರೆವಣಿಗೆಗಳಾದರೂ ಅವುಗಳಲ್ಲಿ ಕೆಲವಾದರೂ ನಾಲ್ಕು ಕಾಲ ನಿಲ್ಲಬಲ್ಲ ಕೃತಿಗಳಾಗಿ ಉಳಿದಿವೆ.
ತಮ್ಮ ತಂದೆಯ ಇಷ್ಟದಂತೆ ಸೈನಿಕ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಅಲ್ಲಿ ತೇರ್ಗಡೆ ಹೊಂದಿ ಚರ್ಚಿಲ್ ಬ್ರಿಟಿಷ್ ಸೈನ್ಯಕ್ಕೆ ಸೇರಿದರು. ಬ್ರಿಟಿಷ್ ಸೈನಿಕನಾಗಿ ಭಾರತಕ್ಕೆ ಹೋದಾಗ ಅವರಿಗೆ 23 ವರ್ಷ. ಅಲ್ಲಿನ ತಮ್ಮ ಅನುಭವಗಳನ್ನು ಅವರು 1898ರಲ್ಲಿ ಬರೆದ ದಿ ಸ್ಟೋರಿ ಆಫ್ ದಿ ಮಲಾಕಾಂಟ್ ಫೀಲ್ಡ್ ಎಂಬ ಆತ್ಮಕಥನದಲ್ಲಿ ಬಣ್ಣಿಸಿದ್ದಾರೆ. ಇದರಲ್ಲಿ ಅವರ ಅಸಾಧಾರಣ ಧೈರ್ಯಸಾಹಸಗಳ ಅನುದ್ವಿಗ್ನವಾದ ನಿರಾಡಂಬರವಾದ ನಿರೂಪಣೆ ಇದೆ. 1900ರಲ್ಲಿ ಪ್ರಕಟವಾದ ಸವರೋಲ ಒಂದು ಮನೋರಂಜಕ ರಮ್ಯಕಥೆ. ಇದರಲ್ಲಿ ಚರ್ಚಿಲ್ಲರ ಉಲ್ಲಾಸಕರ ನಿರೂಪಣಾವಧಾನದ ಒಂದು ಮುಖವನ್ನು ಕಾಣಬಹುದು. ಇದಕ್ಕಿಂತ ಸ್ವಲ್ಪ ಮುಂಚೆ ಅವರು ಲಾರ್ಡ್ ಹರ್ಬರ್ಟ್ ಕಿಚನರ್ ಎಂಬಾತನ ನೇತೃತ್ವದಲ್ಲಿ ಉತ್ತರ ಆಫ್ರಿಕದಲ್ಲಿ ಹೋರಾಡುತ್ತಿದ್ದು ನೈಲ್ ನದಿಯ ದಂಡಯಾತ್ರೆ ಎಂದು ಪ್ರಸದ್ಧವಾಗಿರುವ ಕದನದಲ್ಲಿ ಭಾಗವಹಿಸಿದ್ದರಷ್ಟೆ. 1899ರಲ್ಲಿ ಬರೆದ ದಿ ರಿವರ್ ವಾರ್‍ನಲ್ಲಿ ಆ ಯುದ್ಧದ ಸ್ವಾರಸ್ಯಕರ ವರ್ಣನೆ ಇದೆ. ಘಟನೆಗಳ ನಿರೂಪಣೆಯ ನಡುವೆ ಪುಟಿದೇಳುವ ಅಲ್ಲಿನ ನವಿರಾದ ಹಾಸ್ಯ. ಚಿತ್ರಯುಕ್ತವಾದ ವ್ಯಕ್ತಿಚಿತ್ರಣಗಳು ಮನಸೆಳೆಯುವಂತಿವೆ.

ಮೊದಲಿನಿಂದಲೂ ಚರ್ಚಿಲ್‍ರಿಗೆ ತಮ್ಮ ತಂದೆ ಲಾರ್ಡ್‍ರ್ಯಾಂಡಾಲ್ಫ್ ಚರ್ಚಿಲರ ಬಗ್ಗೆ ಅಪಾರ ಗೌರವ ಪ್ರೀತಿಗಳಿದ್ದುವು. ಬದುಕಿನ ಉದ್ದಕ್ಕೂ ಅಪ್ಪನಿಗೆ ತಕ್ಕ ಮಗನಾಗಬೇಕು ಎಂಬುದೇ ಅವರ ತೀವ್ರ ಕಾಳಜಿ. 1906ರಲ್ಲಿ ಬರೆದ ಸರ್ ರ್ಯಾಂಡಾಲ್ಫ್ ಚರ್ಚಿಲ್ ಒಂದು ಶ್ರೇಷ್ಠ ಜೀವನ ಚರಿತ್ರೆ. ಇದನ್ನು ಪರಿಷ್ಕರಿಸಿ ಪುನಃ 1952ರಲ್ಲಿ ಪ್ರಕಟಿಸಲಾಯಿತು.
ಚರ್ಚಿಲ್ಲರು 1922-24ರ ಅವಧಿಯಲ್ಲಿ, ಬ್ರಿಟಿಷ್ ಮಹಾಚುನಾವಣೆಯಲ್ಲಿ ಪರಾಜಯಗೊಂಡಾಗ ಅವರಿಗೆ ರಾಜಕೀಯದಿಂದ ಸ್ವಲ್ಪಕಾಲ ವಿರಾಮ ದೊರೆಯಿತು. ಆ ಸುಮಾರಿನಲ್ಲಿ ಮೂರುವರ್ಷಗಳ ಕಾಲ ಅವರು ಪಟ್ಟಾಗಿ ಕುಳಿತು ತಮ್ಮ ಉದ್ಗ್ರಂಥ ದಿ ವರ್ಲ್ಡ್ ಕ್ರೈಸಿಸ್ ಎಂಬ ಆರು ಸಂಪುಟಗಳ, ಒಂದನೆಯ ಮಹಾಯುದ್ಧದ ಚರಿತ್ರೆಯನ್ನು ಬರೆದು ಮುಗಿಸಿದರು. 1930ರಲ್ಲಿ ಇನ್ನೊಂದು ಪುರವಣಿ ಸಂಪುಟವನ್ನು ಬರೆದು ಅದಕ್ಕೆ ಸೇರಿಸಿದರು. ಆ ಸುಮಾರಿನಲ್ಲೇ ಅವರು ಮೈ ಅರ್ಲಿಲೈಫ್ ಎಂಬ ಆತ್ಮಕಥೆಯನ್ನು ಬರೆದದ್ದು. ಇದರಲ್ಲಿ ಚಿಕ್ಕಂದಿನ, ಪ್ರಸಿದ್ಧ ಹ್ಯಾರೋ ಪಬ್ಲಿಕ್ ಶಾಲೆಯನ್ನು ಕುರಿತ ಸ್ವಾರಸ್ಯವಾದ ವಿವರಗಳಿವೆ. ಮುಂದೆ ಪ್ರಸಿದ್ಧ ರಾಜಕಾರಣಿಗಳಾದ ಬಾಲ್ಯದ ಒಡನಾಡಿಗಳನ್ನು ಕುರಿತ ವ್ಯಂಗ್ಯಹಾಸ್ಯಭರಿತ ಉಲ್ಲೇಖಗಳಿವೆ. 1932ರಲ್ಲಿ ಬಂದ ಥಾಟ್ಸ್ ಅಂಡ್ ಅಡ್ವೆಂಚರ್ಸ್ ಬಹುಕಾಲ ಮನೆಮಾತಾಗಿ ಉಳಿದ ಸೊಗಸಾದ ಗದ್ಯಗ್ರಂಥ. ಇದರಲ್ಲಿ ಇಪ್ಪತ್ತನೆಯ ಶತಮಾನದ ಯುಗ ಪುರುಷರೆಂದು ಪ್ರಿಸಿದ್ಧರಾದ ಲೆನಿನ್ ಮುಂಥಾದವರನ್ನು ಕುರಿತ ರೋಚಕವಾದ ನುಡಿಚಿತ್ರಗಳಿವೆ. ಅವರ ಅಭಿಪ್ರಾಯ ಧೋರಣೆಗಳಲ್ಲಿ ವ್ಯೆಯಕ್ತಿಕವಾದ ಸಂಕೋಚಗಳು ಕಾಣಿಸಿಕೊಂಡರೂ ಇಲ್ಲಿನ ಅವರ ಮಾತಿನ ಸಮತೂಕ, ವಿಚಾರಗಳ ಹರವು ಮನಸೆಳೆಯುತ್ತವೆ.

ಅದೇ ಕಾಲದಲ್ಲಿ ಬೆಳಕು ಕಂಡ ಮತ್ತೊಂದು ದೀರ್ಘ ಗ್ರಂಥ-ಮಾರ್ಲ್ ಬರೋ ಅಂಡ್ ಹಿಸ್ ಟೈಮ್ಸ್ (1933-38). ಇದರಲ್ಲಿ ಅವರ ಬಂಧು ಡ್ಯೂಕ್ ಆಫ್ ಮಾರ್ಲ್‍ಬರೋ ಮಹಾಶಯನ ಜೀವನ ಚರಿತ್ರೆ ಇದೆ. ಪ್ರಸಿದ್ಧ ಇಂಗ್ಲಿಷ್ ಚರಿತ್ರಕಾರ ಮಕಾಲೆ ತನ್ನ ಗ್ರಂಥದಲ್ಲಿ ಮಾರ್ಲ್‍ಬರೋವನ್ನು ಕಟುವಾಗಿ ಟೀಕಿಸಿದ್ದ. ಅದಕ್ಕೆ ಪ್ರತ್ಯುತ್ತರವಾಗಿ ತಮಗೆ ಸರಿಯೆಂದು ತೋರಿದ ಸಮಾಧಾನ ನೀಡುವ ಸಲುವಾಗಿ ಚರ್ಚಿಲ್ ಈ ಗ್ರಂಥ ಬರೆಯಲು ಪ್ರಾರಂಭಿಸಿದರು. ಆದರೆ ಗ್ರಂಥದ ಉದ್ದೇಶ. ವ್ಯಾಪ್ತಿಗಳೆರಡೂ ಕ್ರಮೇಣ ಹಿಗ್ಗುತ್ತ ಹೋದಾಗ ಅವರು ನಾಲ್ಕು ಸಂಪುಟಗಳ ಸುದೀರ್ಘ ಚರಿತ್ರೆಯನ್ನೇ ಬರೆದರು. ಯುದ್ಧಕಾಲದ ಬ್ರಿಟಿಷ್ ರಾಜಕಾರಣಿ, ನಾಕ ಹೇಗೆ ಅನಿವಾರ್ಯವಾಗಿ ಸಮಗ್ರ ಯೂರೋಪಿನ ರಾಜಕೀಯ ಘಟನೆಗಳ ಮೇಲೆ ಪ್ರಭಾವ ಬೀರುತ್ತಾನೆಂಬುದರ ವಿಶ್ಲೇಷಣೆ ಇಲ್ಲಿದೆ. ಯಾವುದೇ ದೇಶಕಾಲಗಳ ಮುತ್ಸದ್ದಿತನ ಹೇಗೆ ರೂಪುಗೊಳುತ್ತದೆ ಎಂಬುದನ್ನು ಕುರಿತ ವಿಚಾರ ಸಂಹಿತ, ಈ ಗ್ರಂಥ. 

	ಚರ್ಚಿಲ್ ರಚಿಸಿದ ಇತಿಹಾಸಗ್ರಂಥಗಳಲ್ಲಿ ಅವರ ಮೇರುಕೃತಿ ಎಂದು ಹೆಸರಾದದ್ದು-ಆರು ಸಂಪುಟಗಳ ಸೆಕೆಂಡ್ ವರ್ಲ್ಡ್ ವಾರ್. ಇದನ್ನು ಅವರು 1948-54ರ ಆರು ವರ್ಷಗಳ ಅವಧಿಯಲ್ಲಿ ಬರೆದರು. ಎರಡನೆಯ ಮಹಾಯುದ್ಧದ ಅನಂತರ ಬ್ರಿಟನ್ನಿನ ಚುನಾವಣೆಯಲ್ಲಿ ಲೇಬರ್ ಪಕ್ಷ ಪ್ರಚಂಡ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಾಗ ರಾಜಕಾರಣಿ ಚರ್ಚಿಲ್ ಮತ್ತೊಮ್ಮೆ ಅಧಿಕಾರದಿಂದ ಬಿಡುವು ಪಡೆದರೂ ಸಾಹಿತಿ ಚರ್ಚಿಲ್ ವಿಶ್ರಾಂತನಾಗಲಿಲ್ಲ. 1956-58ರ ನಡುವೆ ಅವರು ಎ ಹಿಸ್ಟರಿ ಆಫ್ ದಿ ಇಂಗ್ಲಿಷ್ ಸ್ಪೀಕಿಂಗ್ ಪೀಪಲ್ಸ್ ಎಂಬ ಮತ್ತೊಂದು ಬೃಹತ್ ಇತಿಹಾಸ ಗ್ರಂಥ ಬರೆದರೂ ಅವರಿಗೆ ಉನ್ನತ ಕೀರ್ತಿ ತಂದುಕೊಟ್ಟಿರುವ ಗ್ರಂಥ-ಸೆಕೆಂಡ್ ವರ್ಲ್ಡ್ ವಾರ್. ಈ ಗ್ರಂಥವೊಂದರಿಂದಲೇ ಅವರ ಸಾರತ್ವತ ಸಾಧನೆಯ ರೂಪರೇಖೆಗಳನ್ನು ಗುರುತಿಸಬಹುದು. ಇತಿಹಾಸದ ಗಂಡಾಂತರ ಕಾಲದಲ್ಲಿನ ಮಹತ್ತರವಾದ ಘಟನೆಗಳಲ್ಲಿ ಭಾಗವಹಿಸಿದವರೇ ನೇರವಾಗಿ ಆಯಾ ಘಟನೆಗಳನ್ನು ಕುರಿತು ವರದಿ ಮಾಡುವಾಗ ಅಂಥ ಗ್ರಂಥಗಳು ಕೆಲವೊಮ್ಮೆ ಕೇವಲ ಸಾಂದರ್ಭಿಕವಾದ ಮಾನ್ಯತೆಗೆ ಪಾತ್ರವಾಗಿ ಸ್ವಲ್ಪಕಾಲದ ಮೇಲೆ ಆಕರ ಗ್ರಂಥಗಳ ರಾಶಿಯಲ್ಲಿ ಸೇರಿಬಿಡುತ್ತವೆ. ಅವು ಆಗೊಮ್ಮೆ ಈಗೊಮ್ಮೆ ಅಜ್ಞಾತ ವಿವರಗಳನ್ನು ಹುಡುಕುವ ಸಂಶೋಧಕರ ಪಾಲಿಗೆ ಮಾತ್ರ ಜೀವಂತವಾಗಿ ಉಳಿದುಕೊಂಡಿರುತ್ತವೆ ಅಷ್ಟೆ. ಆದರೆ ಚರ್ಚಿಲರ ಗ್ರಂಥ ಇದಕ್ಕೆ ಅಪವಾದವೆನ್ನಬಹುದು. ಇತಿಹಾಸಜ್ಞನ ವಿಶಿಷ್ಟ ಶಬ್ದ ಸಂಪತ್ತು. ಜೀವನಾನುಭವದ ವ್ಯಾಪ್ತಿ ಗ್ರಂಥದಲ್ಲಿ ಕಾಣಸಿಗುವ ಖಚಿತವಾದ ಒಳನೊಟ ಸೀಳನೋಟಗಳು, ನಿರೂಪಣೆಯ ನಾಟಕೀಯತೆ, ಶೈಲಿಯ ಹಾಸುಬೀಸು-ಇವುಗಳಿಂದಾಗಿ ಚರ್ಚಿಲರ ಗ್ರಂಥ ಉತ್ಕøಷ್ಟವೆನಿಸಿಕೊಂಡಿದೆ. ಸುಮಾರು 50 ವರ್ಷಗಳ ಅವಧಿಯ ಸೈನ್ಯ ಸಂಚಲನೋಪಾಯಗಳು, ಸೈನಿಕ ಕಾರ್ಯಾಚರಣೆಗಳು, ರಾಜಕಾರಣ ಸಂಬಂಧಗಳು, ಪಾರ್ಲಿಮೆಂಟಿನ ಹಾಗೂ ಅಂತರ ರಾಷ್ಟ್ರೀಯ ಕಾರ್ಯಕಲಾಪಗಳು-ಇವುಗಳನ್ನು ಕುರಿತು ನಿಕಟ ಅನುಭವವಿದ್ದ ಚರ್ಚಿಲ್ ತಮ್ಮ ಬದುಕಿನಲ್ಲಿ ಕಂಡ ಅನುಭವವೆಲ್ಲವನ್ನೂ ಈ ಗ್ರಂಥದ ರಚನೆಯಲ್ಲಿ ಬಳಸಿಕೊಂಡಿದ್ದಾರೆ. ಮೊದಲ ಸಂಪುಟದ ಪೀಠಿಕೆಯಲ್ಲಿ ಹೇಳಿರುವಂತೆ ಇದು ಅವರು ಒಂದನೆಯ ಮಹಾಯುದ್ಧವನ್ನು ಕುರಿತು ಬರೆದ ಮೂರು ಸಂಪುಟಗಳ ಇತಿಹಾಸದ ಮುಂದಿನ ಭಾಗ, ಈ ಒಂಬತ್ತು ಸಂಪುಟಗಳಲ್ಲಿ 1914ರಿಂದ 1945ರ ವರೆಗಿನ ಮೂವತ್ತು ವರ್ಷದ ಯುದ್ಧದ ಕಥೆ ಇದೆ. 

ಈ ಗ್ರಂಥಗಳನ್ನು ಬರೆಯುವಲ್ಲಿ ಅವರು ಡೇನಿಯಲ್ ಡಫೊ ತನ್ನ ಮೆಮಾಯರ್ಸ್ ಆಫ್ ಎ ಕ್ಯವೆಲಿಯರ್ ಎಂಬ ಬಖೈರಿನಲ್ಲಿ ಅನುಸರಿಸಿರುವ ವ್ಯಕ್ತಿನಿಷ್ಠ ರೀತಿಯನ್ನೇ ಅನುಸರಿಸಿದ್ದಾರೆ  ವ್ಯೆಯಕ್ತಿಕ ಅನುಭವಗಳ ಮೂಲಕ ಲೋಕದ ವ್ಯಾಪಾರವನ್ನು ಸಮೀಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಹಲವು ದಶಕಗಳ ಕಾಲ ಬ್ರಿಟಿಷ್ ಸಾರ್ವಜನಿಕ ಜೀವನದಲ್ಲಿದ್ದು, ಯುದ್ಧಕಾಲದಲ್ಲಿ ಬ್ರಿಟನ್ನಿನ ನೇತಾರರಾಗಿದ್ದುದು ಕೃತಿರಚನೆಗೆ ಒಂದು ವರವಾಗಿ ಪರಿಣಮಿಸಿದೆ. ಇಲ್ಲಿನ ಘಟನೆಗಳಲ್ಲಿ ಕ್ರಿಯೆಯ ನಿರೂಪಣೆಯಲ್ಲಿ ಬೇಕಾದಷ್ಟು ಸಂಕೀರ್ಣತೆ ಇದೆ; ಇತಿಹಾಸದ ಹಿನ್ನೆಲೆಯಲ್ಲಿ ಜಗತ್ತಿನ ನೂರೆಂಟು ವ್ಯಕ್ತಿಗಳು ಸುಳಿದು ಹೋಗುತ್ತಾರೆ. ಇತಿಹಾಸದ ಗತಿಯನ್ನೇ ತಿರುಗಿಸಿದ, ಯುದ್ಧಕಾಲದಲ್ಲಿ ಕೈಕೊಳ್ಳಬೇಕಾಗಿ ಬಂದ ನೂರೆಂಟು ಪ್ರಮುಖ ತೀರ್ಮಾನಗಳ ಹಿನ್ನೆಲೆಯನ್ನೂ ಸಂದರ್ಭವನ್ನೂ ವಿವರಿಸುವಾಗ ನಿರೂಪಣೆ ನಾಟಕೀಯತೆಯಿಂದ ತುಂಬಿಕೊಳ್ಳುತ್ತದೆ. ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಪರಸ್ಪರ ಸಾಮರಸ್ಯವಾಗಲಿ ನಿಶ್ಚಿತವಾದ ಧೋರಣೆಯಾಗಲಿ ಇಲ್ಲದೆ ಹೋದುದರಿಂದ ಯುದ್ಧ ಅನಿವಾರ್ಯವಾಯಿತು-ಎಂದು ಚರ್ಚಿಲ್ ಒತ್ತಿ ಹೇಳುತ್ತಾರೆ.

ಇಷ್ಟೆಲ್ಲ ಹೇಳಿದರೂ ಚರ್ಚಿಲರ ಇತಿಹಾಸ ಗ್ರಂಥಗಳ ಒಂದು ದೋಷವನ್ನು ಮರೆಯಲಾಗದು. ಇತಿಹಾಸದ ಘಟನೆಗಳಿಗೆ ಸಂಬಂಧಿಸಿದ ವಿಚಾರಧಾರೆಯನ್ನು ಮಂಡಿಸುವಾಗ ಚರಿತ್ರಕಾರ ಚರ್ಚಿಲ್ ತಮ್ಮ ಮೂಗಿನ ನೇರಕ್ಕೇ ಮಾತನಾಡುತ್ತಾರೆ. ಘಟನೆಗಳ ಕಾರ್ಯಕಾರಣ ಸಂಬಂಧವನ್ನು ತಮಗಿಷ್ಟಬಂದ ಹಾಗೆ ವಿಮರ್ಶಿಸುತ್ತಾರೆ- ಎನಿಸುತ್ತದೆ. ಈ ವಿಷಯವನ್ನು ಸಿ. ಪಿ. ಸ್ನೋ ಹೀಗೆ ಸಂಕ್ಷೇಪಿಸುತ್ತಾರೆ  ಚರ್ಚಿಲ್ಲರ ಮಹಾಯುದ್ಧಗಳ ಬಖೈರುಗಳು ಅದ್ಭುತ ರೀತಿಯಲ್ಲಿ ಆಕರ್ಷಕವಾಗಿವೆ. ಮನವೊಪ್ಪಿಸುವಂತಿವೆ. ಅವನ್ನು ಓದುವಾಗ ನಾವು ಸಂಪೂರ್ಣವಾಗಿ ಅವರ ಪಕ್ಷವನ್ನೇ ವಹಿಸಿಬಿಡುತ್ತೇವೆ. ಆದರೆ ಈಗೀಗ ಮಿಲಿಟರಿ ತಜ್ಞರು ಹಲವು ಸಂಗತಿಗಳನ್ನು ಕುರಿತು ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಆದ್ದರಿಂದ ಮಹಾಯುದ್ಧದ ಆಪತ್ಕಾಲದಲ್ಲಿ ಚರ್ಚಿಲ್ ಕೈಕೊಂಡ ಹಲವಾರು ಪ್ರಮುಖ ತೀರ್ಮಾನಗಳ ಬಗ್ಗೆ, ಇತಿಹಾಸ ಸಂಪೂರ್ಣವಾಗಿ ಅವರ ಪಕ್ಷ ವಹಿಸಲಾರದು ಎಂದು ಕಾಣಿಸುತ್ತದೆ.

ಭಾಷಣಕಾರ ಚರ್ಚಿಲ್ಲರ ವ್ಯಕ್ತಿಚಿತ್ರ ನೀಡುತ್ತ ಸಿ. ಪಿ. ಸ್ನೋ ಮುಂದುವರಿದು, ಚರ್ಚಿಲರಿಗೆ ಅತ್ಯಂತ ಪ್ರಬಲವಾದ ಚೇತನಶಕ್ತಿ ಇತ್ತು. ಆದರೆ ಅದು ಭಾವನಾ ಪ್ರಧಾನವಾದ್ದರಿಂದ (ರೊಮ್ಯಾಂಟಿಕ್) ಅವರು ಲೆಕ್ಕಚಾರದ ಸ್ವಭಾವದವರಾಗಿರಲಿಲ್ಲ. ಅವರು ಕೈಕೊಳ್ಳಬೇಕಾದ ಯಾವುದೋ ಒಂದು ಕಾರ್ಯಕ್ರಮ ಕುರಿತು ಸುದೀರ್ಘವಾಗಿ ಯೋಚಿಸುತ್ತಿದ್ದಾಗ, ತಾವೊಬ್ಬರೇ ಅಂತರಂಗದಲ್ಲಿ ಅದರ ಬಗ್ಗೆ ಸ್ಪಷ್ಟಕಲ್ಪನೆ ತಳೆದಾಗ, ಅದನ್ನು ಹೇಗಾದರೂ ಮಾಡಲೇಬೇಕೆಂಬ ಮಹದಾಭಿಲಾಷೆಗೆ ಪಕ್ಕಾದಾಗ, ಅವರು ಅದು ಕಾರ್ಯಸಾಧ್ಯವೆಂದೇ ನಂಬಿಬಿಡುತ್ತಿದ್ದರು. ಸರಿ. ಅವೇಲೆ ತಮ್ಮ ಅನನ್ಯ ಕಲ್ಪನಾಶಕ್ತಿಯಿಂದ, ವಾಗ್ವೈಖರಿಯಿಂದ, ಎದೆಗಾರಿಕೆಯಿಂದ ಅಂಥ ಕಾರ್ಯಕ್ರಮ ಸುಲಭಸಾಧ್ಯ ಮಾತ್ರವಲ್ಲ, ಮನುಷ್ಯನಾದವನಿಗೆ ಅದನ್ನು ಬಿಟ್ಟು ಅನ್ಯಮಾರ್ಗವೇ ಇಲ್ಲ ಎಂದು ತಮ್ಮ ಶ್ರೋತೃಗಳನ್ನು ಮನವೊಲಿಸಿ ಬಿಡುತ್ತಿದ್ದರು. ಆದರೆ ದುರ್ದೈವದಿಂದ ಬದುಕಿನ ಕಠೋರ ವಾಸ್ತವಾಂಶಗಳು ಅವರ ಶ್ರೋತೃಗಳಷ್ಟು ಮೆತುವಾಗಿರಲಿಲ್ಲ. ಸುನಮ್ಯವಾಗಿರಲಿಲ್ಲ. ಇಂಥ ಭಾವುಕ ಗೀಳುಗಳು ಅವರ ಬೆನ್ನುಹತ್ತಿದಾಗ, ಯುದ್ಧಕಾಲ ಹಾಗೂ ಶಾಂತಿಕಾಲಗಳೆರಡರಲ್ಲೂ ಚರ್ಚಿಲರು ಘೋರವಾದ ತಪ್ಪುಗಳನ್ನು ಮಾಡಿದ್ದುಂಟು. ಭಾರತಸ್ವಾತಂತ್ರ್ಯದ ವಿಷಯದಲ್ಲಿ ಅವರು ಕೈಕೊಂಡ ನಿಲುವನ್ನು ಪ್ರಸ್ತಾಪಿಸುತ್ತ ಸ್ನೋ ಅವರು ಚರ್ಚಿಲ್ಲರ ಪ್ರಖ್ಯಾತ ಘೋಷಣೆಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ : ನಾನು ಬ್ರಿಟನ್ನಿನ ಪ್ರಧಾನಿಯಾಗಿರುವುದು ಬ್ರಿಟಿಷ್ ಚಕ್ರಾಧಿಪತ್ಯದ ವಿಸರ್ಜನೆಯ ಉಸ್ತುವಾರಿ ನಡೆಸುವುದಕ್ಕಲ್ಲ-ಎಂಬ ಚರ್ಚಿಲರ ಘೋಷಣೆ ಮಹೋನ್ನತೆ ಶೈಲಿಯು ಮಾತುಗಾರಿಕೆಯಾದರೂ ಚರಿತ್ರೆಯ ದೃಷ್ಟಯಿಂದ ಪೊಳ್ಳುಮಾತಾಯಿತು. ತಮ್ಮ ಈ ತೆರನಾದ ಅತಿಭಾವುಕತೆಯಿಂದ ಅವರು ಗಾಂಧೀಜಿ, ನೀಲ್ಸ್ ಬೋರ್ ಮುಂತಾದವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಆದರೆ ಈ ತೆರನಾದ ಭಾವುಕತೆಯೇ ಅವರಿಗೆ ಮಹಾಯುದ್ಧದ ಕಾಲದಲ್ಲಿ ಒಂದು ವರವಾಯಿತು. ಅತ್ಯಂತ ಕ್ರೂರ ವಿಪತ್ತಿನ ವಿರುದ್ಧ ಜಗತ್ತಿನ ರಾಷ್ಟ್ರಗಳು ಹೋರಡುತ್ತಿದ್ದಾಗ, ಅವರ ಸಂವೇದನಾಶೀಲತೆಯೇ ಅವರಿಗೆ ಸಂಜೀವಿನೀಶಕ್ತಿಯಾಯಿತು. ಚರ್ಚಿಲರ ಬಖೈರುಗಳು, ಇತಿಹಾಸಗ್ರಂಥಗಳು ಎಷ್ಟೇ ದೋಷಪೂರಿತವಾಗಿರಲಿ ವಿಮರ್ಶಕರು ಹೇಳುವಂತೆ ಅವು ಉದಾರ ಹೃದಯಿಯೊಬ್ಬನು ಬರೆದ ಕೃತಿಗಳಾಗಿವೆ.
(ಎಚ್.ಕೆ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ